ಅನತ್ತವಾದ
ವೈದಿಕಧರ್ಮದ ಆತ್ಮವಾದಕ್ಕೆ ವ್ಯತಿರಿಕ್ತವಾಗಿ ಬೌದ್ಧರು ಈ ವಾದದಲ್ಲಿ ದೇಹೇಂದ್ರಿಗಳಿಂದ ಭಿನ್ನವಾದ, ಶಾಶ್ವತವಾದ ಆತ್ಮವಸ್ತು ಇಲ್ಲವೆಂದು ಸಾಧಿಸುತ್ತಾರೆ. ಪುರುಷನನ್ನು ವಿಶ್ಲೇಷಣೆ ಮಾಡಿದರೆ ನಾಮ, ರೂಪವೆಂಬ ದೇಹವೆಂದೂ ನಾಮವೆಂಬುದುವೇದನಾ-ಸುಜ್ಞಾ-ಸಂಚಾರ-ವಿಜ್ಞಾನಗಳೆಂಬ ನಾಲ್ಕು ಖಂದಗಳೆಂದೂ ಇವನ್ನು ಬಿಟ್ಟು ಮತ್ತೆ ಯಾವ ವಸ್ತುಗಳಾಗಲಿ ಇರದೆಂದೂ ಈ ವಾದ ಹೇಳುತ್ತದೆ. ಪುರುಷನೆಂಬುದು ಈ ಐದು ಖಂದಗಳ ಸಂಘಾತವಷ್ಟೆ; ಇದನ್ನು ಪುದ್ಗಲವೆಂದೂ ಪರ್ಯಾಯವಾಗಿ ಹೇಳುತ್ತಾರೆ. ಆದರೆ ಅನುಭವಸಿದ್ಧವಾದ ಆತ್ಮದ ಕಲ್ಪನೆಯನ್ನು ಒಪ್ಪಿಕೊಳ್ಳುತ್ತಾರೆ; ನಾನು, ನನ್ನದು ಮುಂತಾದ ಅನುಭವಗಳಲ್ಲಿರುವ ಸ್ವಪ್ರತ್ಯಯ ಜೀವನದಲ್ಲಿ ಉದ್ಭೂತವಾದದ್ದಷ್ಟೆ; ವ್ಯಾವಹಾರಿಕವಾದ ಈ ಸತ್ಯ ನಿಜವಾಗಿ ಇರದು. ಇದನ್ನು ಮಹಾಯಾನಪಂಥದವರು ನೈರಾತ್ಮ್ಯವೆಂದು ಕರೆದು ಶೂನ್ಯವಾದವನ್ನು ಪ್ರತಿಪಾದಿಸುತ್ತಾರೆ.    

 (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ